ಚಂದ್ರಶೇಖರ ಆಝಾದ್
1906-1931. ಭಾರತ ವಿಮೋಚನೆಗಾಗಿ ದಿಟ್ಟತನದಿಂದ ಹೋರಾಡಿ ಪ್ರಾಣತೆತ್ತ ಕ್ರಾಂತಿವೀರ. ಮಧ್ಯ ಪ್ರದೇಶದ ಝಾಭುವಾ ಜಿಲ್ಲೆಯ ಭಾವರಾ ಎಂಬ ಹಳ್ಳಿಯಲ್ಲಿ ಜನನ. ತಂದೆ ಪಂಡಿತ್ ಸೀತಾರಾಮ್ ತಿವಾರಿ, ತಾಯಿ ಜಗರಾನೀ ದೇವಿ. ತಂದೆ ಬಡವರು. ಆರಂಭದ ಶಿಕ್ಷಣವನ್ನು ಭಾವರಾದಲ್ಲಿಯೆ ಪಡೆದ ಚಂದ್ರಶೇಖರ ಬಾಲ್ಯದಲ್ಲೇ ಬಿಲ್ಲರ ಜೊತೆ ಸೇರಿ ಬಿಲ್ಲು ಬಾಣ ಹಿಡಿದು ಅವರೊಂದಿಗೆ ಅಲೆಯುತ್ತಿದ್ದರು. ತಂದೆತಾಯಿಯರು ಇದರಿಂದ ಬಹಳ ಆತಂಕಗೊಂಡಿದ್ದರು. ಸುಮಾರು ಹದಿನಾಲ್ಕನೆಯ ವಯಸ್ಸಿಗೆ ಚಂದ್ರಶೇಖರ ವಾರಾಣಸಿಯನ್ನು ಸೇರಿ ಉಚಿತ ಊಟವಸತಿ ಪಡೆದು ಸಂಸ್ಕøತ ಪಾಠಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು.

ಅದು 1920-21ರ ಅಸಹಕಾರ ಚಳವಳಿಯ ಕಾಲ. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಚಳವಳಿಗೆ ವಿದ್ಯಾರ್ಥಿಗಳು ಧುಮುಕುತ್ತಿದ್ದರು. ಚಂದ್ರಶೇಖರರೂ ಚಳವಳಿಗಿಳಿದು ಬಂಧಿತರಾದರು. ನ್ಯಾಯಾಲಯದಲ್ಲಿ ಕೇಳಲಾದ ಪ್ರಶ್ನೆಗಳಿಗೆ ತಮ್ಮ ಹೆಸರು ಆeóÁದ್ (ಸ್ವತಂತ್ರ), ತಂದೆಯ ಹೆಸರು ಸ್ವಾಧೀನ, ತಮ್ಮ ಮನೆ ಜೈಲು ಎಂದು ಉತ್ತರಿಸಿದರು. ನ್ಯಾಯಾಧೀಶ ಅವರಿಗೆ 15 ಛಡಿ ಏಟುಗಳ ಶಿಕ್ಷೆ ವಿಧಿಸಿದ. ಪ್ರತಿ ಏಟಿಗೂ ಮಹಾತ್ಮಗಾಂಧಿ ಕಿ ಜೈ ಎಂದು ಆeóÁದ್ ಜಯಕಾರ ಮಾಡುತ್ತ ಅವನ್ನು ಸಹಿಸಿದರು. ಜನ ಅವರನ್ನು ಆeóÁದ್ ಎಂದೇ ಕರೆದು ಗೌರವಿಸಿದರು. ಆ ಹೆಸರಿನಿಂದ ಮುಂದೆ ಅವರು ಪ್ರಸಿದ್ಧರಾದರು. ಗಾಂಧಿಯವರು ಅಸಹಕಾರ ಚಳವಳಿಯನ್ನು ಹಿಂದೆಗೆದುಕೊಂಡಾಗ ಕೆಲವರಲ್ಲಿ ಕ್ರಾಂತಿಯ ಮನೋಭಾವ ಕೆರಳಿತು. ಮನ್ಮಥನಾಥ ಗುಪ್ತರ ಸಹಾಯದಿಂದ ಚಂದ್ರಶೇಖರ ಆeóÁದ್ ಹಿಂದೂಸ್ತಾನ ಸಮಾಜವಾದಿ ಗಣರಾಜ್ಯವಾದಿ ಸೈನ್ಯವನ್ನು ಸೇರಿ ಅಲ್ಲಿ ಬಹುಬೇಗ ಜನಪ್ರಿಯರಾದರು. ಆ ಸಂಸ್ಥೆಯ ನೇತೃತ್ವದಲ್ಲಿ ನಡೆದ ಬಹುಪಾಲು ಸಶಸ್ತ್ರ ಕಾರ್ಯಾಚರಣೆಗಳಲ್ಲಿ ರಾಮಪ್ರಸಾದ್ ಬಿಸ್ಮಿಲ್ಲರ ಜೊತೆಯಲ್ಲಿ ಅವರು ಭಾಗವಹಿಸಿದರು. 1925ರ ರೈಲು ಲೂಟಿ, ಕಾಕೋರಿ ವಿದ್ರೋಹ (1926), ವಿಧಾನ ಸಭೆಯಲ್ಲಿ ಬಾಂಬ್ ಎಸೆತ, ದೆಹಲಿ ವಿದ್ರೋಹ, ಲಾಹೋರಿನಲ್ಲಿ ಸಾಂಡರ್ಸನ ಕೊಲೆ (1928), ಎರಡನೆಯ ಲಾಹೋರ್ ದಂಗೆ ಇವುಗಳಲ್ಲೆಲ್ಲ ಚಂದ್ರಶೇಖರ್ ಆeóÁದರ ಪಾತ್ರವಿತ್ತು. ಕಾಕೋರಿ ದಂಗೆಯಲ್ಲಿ ರಾಮಪ್ರಸಾದ್ ಬಿಸ್ಮಲ್ಲರಿಗೆ ಘಾಸಿ ಶಿಕ್ಷೆಯಾಯಿತು. ಚಂದ್ರಶೇಖರ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡರು.

1928ರಲ್ಲಿ ಸೈಮನ್ ಕಮಿಷನನ್ನು ನಿಷೇಧಿಸುವ ಸಂದರ್ಭದಲ್ಲಿ ಪೋಲೀಸರ ಲಾಠಿ ಪೆಟ್ಟು ತಿಂದು ಲಾಲಾ ಲಜಪತರಾಯ್ ತೀರಿಕೊಂಡರು. ಇದಕ್ಕೆ ಪ್ರತೀಕಾರವಾಗಿ ಲಾಹೋರಿನ ಪೋಲೀಸ್ ಸೂಪರಿಂಟೆಂಡೆಂಟ್ ಸಾಂಡರ್ಸ್ ಗುಂಡಿಗೆ ಬಲಿಯಾದ. ಈ ಸಂಚಿನಲ್ಲಿ ಚಂದ್ರಶೇಖರ, ಭಗತ್ ಸಿಂಹ, ಜಯಗೋಪಾಲ್ ಮತ್ತು ರಾಜಗುರು ಭಾಗವಹಿಸಿದ್ದರು. ಭಗತ್ ಸಿಂಹ, ರಾಜಗುರು ಮತ್ತು ಸುಖದೇವರಿಗೆ ಗಲ್ಲಾಯಿತು. ಚಂದ್ರಶೇಖರ ಮತ್ತೆ ತಪ್ಪಿಸಿಕೊಂಡರು. 1930ರ ಜುಲೈ 6ರಂದು ದೆಹಲಿಯ ಅಂಗಡಿಯೊಂದರಲ್ಲಿ 14,000 ರೂ. ಲೂಟಿ ಮಾಡಿದರು. ಇದರ ಶೋಧನೆಯಲ್ಲಿ ಇವರ ಕೆಲವು ಅನುಯಾಯಿಗಳನ್ನು ದಸ್ತಗಿರಿಯಾದರು. ದೆಹಲಿಯಲ್ಲೇ, ಚಂದ್ರಶೇಖರರ ಗುಂಪಿನವರು ಬಾಂಬುಗಳನ್ನು ತಯಾರಿಸುತ್ತಿದ್ದ ಸ್ಥಳದಲ್ಲಿ 6,000 ಬಾಂಬುಗಳಿಗೆ ಸಾಕಾಗುವಷ್ಟು ರಾಸಾಯನಿಕ ಮತ್ತು ಇತರ ಪದಾರ್ಥಗಳ ಪತ್ತೆಯಾಯಿತು. ಚಂದ್ರಶೇಖರ ಪಂಜಾಬಿಗೆ ತಪ್ಪಿಸಿಕೊಂಡು ಹೋದರು. ಅವರನ್ನು ಹಿಡಿದು ಕೊಟ್ಟವರಿಗೆ ಅಥವಾ ಅವರ ದಸ್ತಗಿರಿಗೆ ಸಹಾಯ ಮಾಡಿದವರಿಗೆ ಸರ್ಕಾರ 10,000 ರೂ. ಬಹುಮಾನ ನೀಡುವುದಾಗಿ ಘೋಷಿಸಿತು. ಆದರೆ ಚಂದ್ರಶೇಖರ ಸಿಗಲಿಲ್ಲ.

1931ರಲ್ಲಿ ಫೆಬ್ರವರಿ 27ರಂದು ಅಲಹಾಬಾದಿನ ಆಲ್ ಫ್ರೆಡ್ ಪಾರ್ಕಿನಲ್ಲಿ ಇನ್ನೊಬ್ಬ ಕ್ರಾಂತಿಕಾರಿಯನ್ನು ಆeóÁದ್ ಭೇಟಿಯಾಗಬೇಕಿತ್ತು. ಅವನು ದೇಶಕ್ಕೂ ಆಝಾದರಿಗೂ ದ್ರೋಹ ಬಗೆದು, ಆeóÁದರ ಆಗಮನದ ಬಗ್ಗೆ ಪೋಲೀಸರಿಗೆ ಸೂಚನೆ ಕೊಟ್ಟಿದ್ದ. ಚಂದ್ರಶೇಖರ ಅಲ್ಲಿಗೆ ಬಂದಾಗ ಸಶಸ್ತ್ರ ಪೋಲೀಸರು ಅವರನ್ನು ಸುತ್ತುವರಿದರು. ಆeóÁದ್ ಧೈರ್ಯಗುಂದಲಿಲ್ಲ. ತಮ್ಮಲ್ಲಿದ್ದ ಒಂದು ಚಿಕ್ಕ ಪಿಸ್ತೂಲಿನಿಂದಲೇ ಹೋರಾಡಿ ಇಬ್ಬರು ಪೋಲೀಸರನ್ನು ಗಾಯಗೊಳಿಸಿದರು. ಕೊನೆಗೆ ಗುಂಡಿಗೆ ಬಲಿಯಾದರು. ಪೋಲೀಸರ ಬಂಧನಕ್ಕೊಳಗಾಗಿ ಗಲ್ಲುಗಂಬವನ್ನೇರಲು ಇಷ್ಟಪಡದೆ ಕೊನೆಯ ಗುಂಡಿನಿಂದ ಆತ್ಮಹತ್ಯೆ ಮಾಡಿಕೊಂಡರೆಂದು ಕೆಲವರು ಹೇಳಿದ್ದಾರೆ. ಚಂದ್ರಶೇಖರ ಆಝಾದ್ ಇಂದಿಗೂ ಭಾರತೀಯ ಯುವಕರಿಗೆ ಆದರ್ಶವಾಗಿಯೂ ಉಳಿದಿದ್ದಾರೆ. ಆಝಾದ್ ಅಲಹಾಬಾದಿನ ಪಾರ್ಕಿನಲ್ಲಿ ಪ್ರಾಣಾರ್ಪಣೆ ಮಾಡಿದ ನೇರಳೆ ಮರದ ಗುರುತೂ ಸರ್ಕಾರಿ ಹೊರವಲಯ ಮುದ್ರಣಾಲಯ ಉಳಿಯದಂತೆ ಪೊಲೀಸರು ಅದನ್ನು ಕಡಿದು ಹಾಕಿದರು. ಆದರೆ ಕೆಲವೇ ದಿನಗಳಲ್ಲಿ ಅದೇ ಜಾಗದಲ್ಲಿ ಮತ್ತೊಂದು ನೇರಳೆ ಮರವು ಚಿಗುರಿತು.										(ಎ.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ